ಉಡುಪಿ: ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಮಹಿಳಾ ವಿರೋಧಿ ಧೋರಣೆಗಳು ಕಾಣಿಸುತ್ತವೆ.
ಮಹಿಳಾ ವಿರೋಧಿ ಕಾಂಗ್ರೆಸ್ಸಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಳಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸಚಿವ ಪ್ರಿಯಾಂಕ್ ಖರ್ಗೆಯವರು ಹಿಂದೆಯೂ ಮಹಿಳೆಯರು ಸರಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದಿದ್ದರು. ಈ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದರು. ಇದೀಗ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುವ ಕಾರ್ಯಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ಇಂತಹ ಅವಮಾನಕ್ಕೆ ಮಹಿಳೆಯರು ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವ ಮೂಲಕ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಹಿಂದೂ ಧರ್ಮದ ಪ್ರಕಾರ ಮಹಿಳೆಯರಿಗೆ ಮಾಂಗಲ್ಯ ಮತ್ತು ಕಾಲುಂಗುರಗಳು ಅತ್ಯಂತ ಪವಿತ್ರವಾದ ವಸ್ತುಗಳು. ಅವುಗಳನ್ನು ಸಾಮಾನ್ಯವಾಗಿ ಮಹಿಳೆಯರು ವೈಧವ್ಯ ಬಂದಾಗ ಮತ್ತು ಸಂಪೂರ್ಣ ದೇಹದ ಸ್ಕ್ಯಾನಿಂಗ್ ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ತೆಗೆಯುತ್ತಾರೆ. ಪರೀಕ್ಷೆ ಬರೆಯುವ ವೇಳೆ ಮಾಂಗಲ್ಯ ಮತ್ತು ಕಾಲುಂಗುರ ತೆಗೆಯುವಂತೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ದೇಶದ ಸಮಸ್ತ ಮಹಿಳೆಯರನ್ನು ಅವಮಾನಿಸಿದೆ. ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಧೋರಣೆ ಮತ್ತೊಮ್ಮೆ ಅನಾವರಣಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು