ಮಂಗಳೂರು(ಏ.14): ಲೋಕಸಭಾ ಚುನಾವಣೆ ಘೋಷಣೆ ಬಳಿಕ ಶಿವಮೊಗ್ಗದಲ್ಲಿ ಪ್ರಚಾರ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಎರಡನೇ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೈಸೂರು ಹಾಗೂ ಮಂಗಳೂರಲ್ಲಿ ಇಂದು(ಭಾನುವಾರ) ಸಮಾವೇಶ ಹಾಗೂ ರೋಡ್ ಶೋ ನಡೆಸಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮೈಸೂರಲ್ಲಿ ಸಂಜೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅವರು, ನಂತರ ಮಂಗಳೂರಲ್ಲಿ ರಾತ್ರಿ 2.7 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಹುರುಪು ತುಂಬಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಲ್ಲಿ ಸಾವಿರಕ್ಕೂ ಅಧಿಕ ಹಾಗೂ ಮಂಗಳೂರಲ್ಲಿ 2 ಸಾವಿರಕ್ಕೂ ಹೆಚ್ಚು ಸೇರಿ ಎರಡೂ ಕಡೆ ಒಟ್ಟಾರೆ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮೋದಿ ಕಿ ಗ್ಯಾರೆಂಟಿ ಮೇಲೆ ಭಾರಿ ನಿರೀಕ್ಷೆ, ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ! ಎಚ್‌ಡಿಡಿ-ಮೋದಿ ಮೋಡಿ: ಮಧ್ಯ ಪ್ರದೇಶದಿಂದ ನೇರವಾಗಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಸಂಜೆ 5.15ಕ್ಕೆ ಬಂದಿಳಿಯಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಜರುಗುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರು ಪಾಲ್ಗೊಳ್ಳಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಜತೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ವಿಶೇಷ. ಯುಗಾದಿಗೆ ಮೋದಿ ದರ್ಶನ: ಕರಾವಳಿಯಲ್ಲಿ ಏ.14 ರಂದು ಸೌರಮಾನ ಯುಗಾದಿಯ ಸಂಭ್ರಮ, ಹೊಸ ವರ್ಷದ ಸಂಭ್ರಮದಲ್ಲಿರುವ ಕರಾವಳಿಗರಿಗೆ ಅಂದು ರೋಡ್ ಶೋ ಮೂಲಕ ಪ್ರಧಾನಿ ಮೋದಿ ಅವರ ಸಮೀಪ ದರ್ಶನವೂ ಸಿಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ನಗರದ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದ ವರೆಗೆ ಸುಮಾರು 2.7 ಕಿ.ಮೀ. ದೂರದ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ರಾತ್ರಿ ರಾತ್ರಿ 7.45ಕ್ಕೆ ಆರಂಭವಾಗಲಿದೆ.