ಸತೀಶ್ ಕಾತ್ಯಾಯಿನಿ ಕಾರ್ಕಳ
ಮತದಾನ ಎಂಬುದು ಸ್ವಾತಂತ್ರ್ಯ ಭಾರತೀಯ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಮತವನ್ನು ದಾನ ಮಾಡದೆ ಅದನ್ನು ಹಕ್ಕು, ಕರ್ತವ್ಯ ಎಂದು ಭಾವಿಸಿ ಸೂಕ್ತ ವ್ಯಕ್ತಿಗೆ ಮತವನ್ನು ಚಲಾಯಿಸಿರಿ……..
ಸಾವಿರಾರು ಹೋರಾಟಗಾರರು, ದೇಶಭಕ್ತರ ಬಲಿದಾನ, ತಾಗ್ಯ, ನಿಸ್ವಾರ್ಥ ಹೋರಾಟದಿಂದ ನಾವು ಸ್ವಾತಂತ್ರ್ಯ ಪಡೆದು ಇಂದು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚಿಸಲ್ಪಟ್ಟು ಎಲ್ಲರಿಗೂ ನಿರ್ದಿಷ್ಟ ಹಕ್ಕನ್ನು ನೀಡಲಾಯಿತು.
ಸಂವಿಧಾನ ಬದ್ದತೆಯಿಂದ ಪ್ರಜೆಗಳೆಲ್ಲರೂ ತನಗಿಷ್ಟ ಬಂದ ನಾಯಕ, ಪಕ್ಷವನ್ನು ಯಾವುದೇ ಬಾಹ್ಯ ಪ್ರೇರಣೆಯಿಲ್ಲದೆ ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರು ಆಗಿರುವರು. ಇದೀಗ ಮತ್ತೆ ಚುನಾವಣಾ ದಿನ ಘೋಷಣೆ ಆಗಿ ಎಲ್ಲೆಡೆ ಸಕ್ರಿಯವಾಗಿ ಅಬ್ಬರದ ಪ್ರಚಾರ ನಡೆಯುತ್ತಿದೆ.
ಪ್ರಜಾಪ್ರಭುತ್ವದ ಉತ್ತಮ ಪ್ರಜೆಯಾದ ನಾವು ಇದೀಗ ಮತದಾನ ಮಾಡಲೇ ಬೇಕಾದ ಅವಶ್ಯಕತೆ, ಅನಿರ್ವಾಯತೆ ಇದೆ. ಮತದಾನ ಮಾಡಿ ಏನು ಪ್ರಯೋಜನ ? ಮತದಾನ ಮಾಡಿದರೆ ನಮಗೇನೂ ಲಾಭ ? ಮತದಾನ ಯಾಕೆ ಮಾಡಬೇಕು ??? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡಿ ಬಂದರೂ ಕೂಡ ಉತ್ತಮ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಗಳ ನಿರ್ಮಾಣಕ್ಕಾಗಿ ನಮ್ಮ ಹಕ್ಕನ್ನು ಚಲಾಯಿಸುವ ಅನಿರ್ವಾಯತೆ ಇದೆ. ಮತದಾನದಿಂದ ಉತ್ತಮ ನಾಯಕನನ್ನು ಆರಿಸುವ ಅಗತ್ಯ ಇದೆ. ನಮ್ಮೆಲ್ಲಾ ಆಗುಹೋಗುಗಳಿಗೆ ಸರ್ಕಾರವನ್ನು ಹೊಣೆಯಾಗಿಸುವ ಮೊದಲು ಮತ ಚಲಾಯಿಸೋಣ. ಮತ ಚಲಾವಣೆ ಮಾಡಿ ಮತ್ತೆ ಅನ್ಯಾಯವಾದಲ್ಲಿ ಹಕ್ಕು ಬದ್ದತೆಯಿಂದ ನ್ಯಾಯ ಕೇಳೋಣ. ಹದಿನೆಂಟು ವರ್ಷ ನಂತರ ಪ್ರತಿಯೊಬ್ಬರೂ ಮತದಾನ ಮಾಡುವ……ನಮ್ಮ ಹಕ್ಕನ್ನು ಕರ್ತವ್ಯವೆಂದು ಭಾವಿಸಿ ಚಲಾಯಿಸುವ…….
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅನ್ನುವ ನಿಟ್ಟಿನಲ್ಲಿ ಈಗಾಗಲೇ ಶಾಲಾ ಕಾಲೇಜುಗಳಲ್ಲೂ ಮತದಾನದ ಮಹತ್ವ, ಹಕ್ಕು, ಕರ್ತವ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾನದ ಅರಿವು ತಿಳಿದುಕೊಂಡಲ್ಲಿ ಉತ್ತಮರಲ್ಲಿ ಉತ್ತಮರನ್ನು ನಾವು ಆರಿಸಲು ಸಾಧ್ಯ. ಯಾವುದೇ ಆಸೆ, ಆಮಿಷ, ಹುಸಿ ನಂಬಿಕೆ, ಬಾಹ್ಯ ಪ್ರೇರಣೆಗೆ ಒಳಗಾಗದೆ ಸರಿಯಾದ ರೀತಿಯಲ್ಲಿ ಆಲೋಚಿಸಿ ಮತ ಚಲಾಯಿಸೋಣ.
ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲ ಹಕ್ಕಿಗೆ ಹೋರಾಟ ಮಾಡುವ ಮೊದಲಿಗೆ ನಮ್ಮ ಮತದಾನದ ಹಕ್ಕನ್ನು ಚಲಾವಣೆ ಮಾಡೋಣ. ನಾವು ಮತ ಹಾಕುವ ಮೂಲಕ ಕರ್ತವ್ಯ ನಿಭಾಯಿಸುವ….
✍🏻 ಸತೀಶ್ ಕಾತ್ಯಾಯಿನಿ ಕಾರ್ಕಳ