ಮೂಡುಬಿದಿರೆ : ಜೂನ್ ೧೪ ಶುಕ್ರವಾರದಿಂದ ೧೬ ಭಾನುವಾರದವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಫಲವಸ್ತುಗಳು, ಆಹಾರೋತ್ಸವ, ಕೃಷಿಪರಿಕರಗಳ ಮಾರಾಟ ಬೃಹತ್ ಮೇಳವನ್ನು ಆಯೋಜಿಸಲಾಗಿದೆ. ಮುಂಡ್ರುದೆಗುತ್ತು ಶ್ರೀ ಕೆ. ಅಮರನಾಥ ಶೆಟ್ಟಿ ಸಭಾಂಗಣ, ಶ್ರೀಮತಿ ಸುಂದರಿ ಆನಂದ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೀಮಿತವಾದ ವಿವಿಧ ತಳಿಗಳ ಹಲಸಿನ ಹಣ್ಣುಗಳನ್ನು, ಮಾವು, ಬಾಳೆಗಳ ವೈವಿಧ್ಯಮಯ ತಳಿಗಳನ್ನು, ರಂಬುಟನ್, ಮ್ಯಾಂಗೋಸ್ಟಿನ್, ಅನಾನಸು, ಪೇರಳೆ, ಬಟರ್ಫ್ರುಟ್ಸ್, ಮೊದಲಾದ ತಾಜಾ ಹಣ್ಣುಗಳು ಹಾಗೂ ತರಕಾರಿಗಳು ಒಂದೇ ಕಡೆ ನೋಡುವ, ಖರೀದಿಸುವ ಮತ್ತು ಇಷ್ಟದ ಹಣ್ಣುಗಳ ರುಚಿನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಹಣ್ಣಿನ ರಸ ಪ್ರಿಯರಿಗೆ ಕಬ್ಬು, ಕಲ್ಲಂಗಡಿ ಮತ್ತು ಇತರ ಹಣ್ಣುಹಂಪಲುಗಳ ತಾಜಾರಸವನ್ನು ಯಥೇಚ್ಛ ಅನುಭವಿಸುವ ಅವಕಾಶವೂ ಇಲ್ಲಿದೆ. ಹಣ್ಣು-ತರಕಾರಿಗಳಿಂದಲೇ ತಯಾರಾದ ಸಿದ್ಧ ತಿನಿಸುಗಳ ಮಳಿಗೆಗಳು ಸಿದ್ಧತಿನಿಸು ಪ್ರಿಯರ ಮನಸೂರೆಗೊಂಡರೆ, ಅಲ್ಲೇ ಕೊಯ್ದು ಕೊಡುವ ತಾಜಾ ಹಣ್ಣುಗಳು ಫಲವಸ್ತು ಪ್ರಿಯರ ನಾಲಿಗೆ ರುಚಿಯನ್ನು ತಣಿಸಲಿವೆ.
ಈ ಮಹಾಮೇಳದಲ್ಲಿ ಬೃಹತ್ ಆಹಾರ ಮೇಳವನ್ನು ಆಯೋಜಿಸಿದ್ದು ಹಣ್ಣು-ಹಂಪಲುಗಳಿಂದಲೇ ತಯಾರಾದ ತಿಂಡಿತಿನಿಸುಗಳ ಸುಮಾರು ೫೦ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ದೇಶೀಯ ಮತ್ತು ಪ್ರಾದೇಶಿಕ ಆಹಾರ ಪ್ರಿಯರಿಗೆ ಈ ಮಳಿಗೆಗಳು ರಸದೌತಣವನ್ನು ಉಣಬಡಿಸಲಿವೆ. ಮಾರಾಟ ಮಾಡುವ ಆಹಾರೋತ್ಪನ್ನಗಳು ಸಂಪೂರ್ಣ ಸಸ್ಯಹಾರವಾಗಿದ್ದು, ಮಾಂಸಾಹಾರ, ಫಾಸ್ಟ್ಫುಡ್ ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇದರೊಂದಿಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳೂ ಇಲ್ಲಿವೆ. ಮಣ್ಣಿನ ಮಡಕೆಗಳು, ಗುಡಿ ಕೈಗಾರಿಕೆ ವಸ್ತುಗಳು, ಖಾದಿ ಬಟ್ಟೆ, ಕೃಷಿ ಪರಿಕರಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳಿಗೆ ಸಂಬಂಧಿಸಿದ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳೂ ಇಲ್ಲಿವೆ. ಮಣ್ಣಿನ ಮಡಕೆಗಳು, ಗುಡಿ ಕೈಗಾರಿಕೆ ವಸ್ತುಗಳು, ಖಾದಿ ಬಟ್ಟೆ, ಕೃಷಿ ಪರಿಕರಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳಿಗೆ ಸಂಬಂಧಿಸಿದ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ವ್ಯವಸಾಯಗಾರರಿಗೆ ಸಹಾಯಕವಾಗುವ, ಆಧುನಿಕ ತಂತ್ರಜ್ಞಾನ ಸೌಕರ್ಯಗಳಿರುವ ವಿವಿಧ ಯಂತ್ರೋಪಕರಣಗಳ ಮಳಿಗೆಗಳನ್ನು ಇಲ್ಲಿ ತೆರೆಯಲಾಗುತ್ತದೆ. ವೈವಿಧ್ಯಮಯ ಹೂವು ಮತ್ತು ಹಣ್ಣುಗಳ ಗಿಡಗಳನ್ನು ಪೂರೈಸುವ 20 ಕ್ಕಿಂತ ಹೆಚ್ಚು ನರ್ಸರಿಗಳು ಆಸಕ್ತರ ನರ್ಸರಿ ಅಗತ್ಯಗಳನ್ನು ಈಡೇರಿಸಲಿವೆ.