ಉಡುಪಿ: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಂಪರ್ಕವನ್ನು ಇನ್ನಷ್ಟು ಸಲೀಸು ಮಾಡುವ ನಿಟ್ಟಿನಲ್ಲಿ ಆಗುಂಬೆ ಘಾಟಿಯಲ್ಲಿ ಸುರಂಗ (ಟನಲ್) ನಿರ್ಮಾಣಕ್ಕೆ ವಿಸ್ತೃತ ಯೋಜನ ವರದಿ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸುರು ನಿಶಾನೆ ತೋರಿರುವ ಮಾಹಿತಿಯೇ ಉಡುಪಿ ಜಿಲ್ಲಾಡಳಿತಕ್ಕೆ ಸಿಕ್ಕಿಲ್ಲ.
ಸುಮಾರು 3,500 ಕೋ.ರೂ. ವೆಚ್ಚದಲ್ಲಿ 12 ಕಿ.ಮೀ. ಸುರಂಗ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ 2 ಕೋ.ರೂ. ಮೀಸಲಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪ್ರಾಧಿಕಾರದ ಅಧಿಕಾರಿಗಳು ನೀಡಿದ್ದಾರೆ. ಸುರಂಗ ಮಾರ್ಗವೂ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ಇರುವುದರಿಂದ ಈ ಎರಡೂ ಜಿಲ್ಲೆಗಳ ಸಮನ್ವಯ ಅತಿ ಮುಖ್ಯವಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿ ಸೋಮೇಶ್ವರದಿಂದ ಆಗುಂಬೆ ಘಾಟಿ ಆರಂಭವಾಗುತ್ತದೆ. ಅಲ್ಲಿಂದಲೇ ಸುರಂಗ ಮಾರ್ಗ ಆರಂಭವಾಗಿ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿವರೆಗೂ ಇರಲಿದೆ. ಸುಮಾರು 12 ಕಿ.ಮೀ. ಬರಲಿದೆ. ಕೇಂದ್ರ ಸರಕಾರ ಈ ಹಿಂದೆ ಸುರಂಗ ಮಾರ್ಗ ಪ್ರಸ್ತಾವನ್ನು ತಿರಸ್ಕರಿಸಿತ್ತು. ಇದೀ ಮರು ಜೀವ ಸಿಕ್ಕಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಜೀವವೈವಿಧ್ಯ ಹಾಳು ಮಾಡುವುದು ಬೇಡ
ಪಶ್ಚಿಮಘಟ್ಟ ಹಲವು ಜೀವ ವೈವಿಧ್ಯಗಳ ತವರು. ಇಲ್ಲಿ ಸುರಂಗ ಮಾರ್ಗ ಮಾಡುವುದರಿಂದ ಭವಿಷ್ಯದಲ್ಲಿ ಹತ್ತಾರು ಸಮಸ್ಯೆಗಳು ಉದ್ಭವಿಸುತ್ತವೆ. ಆಗುಂಬೆಯಿಂದಲೇ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಚೆನ್ನಾಗಿ ಮಳೆಯಾಗುತ್ತದೆ ಎಂಬ ಮಾತಿದೆ. ಅಲ್ಲದೆ ಸುರಂಗ ಮಾರ್ಗದಿಂದ ಇಲ್ಲಿನ ಹಸುರು ಪರಿಸರ ಹಾಗೂ ಬೆಟ್ಟ ಗುಡ್ಡಗಳಿಗೆ ಧಕ್ಕೆಯಾದರೆ ವರ್ಷಧಾರೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಆರೋಪವೂ ಇದೆ. ಜೀವ ವೈವಿಧ್ಯವನ್ನು ಉಳಿಸುವ ನಿಟ್ಟಿನಲ್ಲಿ ಸುರಂಗ ಮಾರ್ಗ ನಿರ್ಮಾಣ ಬೇಡವೇ ಬೇಡ ಎಂಬ ಬಲವಾದ ವಾದಗಳು ಕೇಳಿ ಬರುತ್ತಿವೆ. ಯೋಜನೆ ಅನುಷ್ಠಾನಕ್ಕೂ ಮೊದಲು ಡಿಪಿಆರ್ ಸಿದ್ಧಪಡಿಸಲಾಗುತ್ತದೆ. ಜೀವವೈವಿಧ್ಯಕ್ಕೆ ಹಾನಿಯಾ ಗುವುದಾದಲ್ಲಿ ಖಂಡಿತವಾಗಿಯೂ ಅನುಷ್ಠಾನ ಅಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಉಡುಪಿ ಜಿಲ್ಲಾಡಳಿತಕ್ಕೆ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಿರುವ ಬಗ್ಗೆಯೂ ಜಿಲ್ಲಾಡಳಿತದ ಗಮನಕ್ಕೆ ತಂದಿಲ್ಲ. ಸುರಂಗ ಮಾರ್ಗದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಆ ಬಗ್ಗೆ ಯಾವುದೇ ಅಧಿಕೃತ ಪ್ರಸ್ತಾವನೆ ಅಥವಾ ಪತ್ರ ವ್ಯವಹಾರಗಳನ್ನು ಉಡುಪಿ ಜಿಲ್ಲಾಡಳಿತದಿಂದ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸ್ಪಷ್ಟಪಡಿಸಿದ್ದಾರೆ.