ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಎಲ್ಲೆಂದರಲ್ಲಿ ಟಾಪರ್ ಗಳ, ಉತ್ತಮ ಅಂಕ ಪಡೆದವರಿಗೆ ಶುಭಾಶಯ ಕೋರುವ ಜಾಹೀರಾತು, ಬ್ಯಾನರ್, ಫ್ಲೆಕ್ಸ್ ಗಳನ್ನು ನೋಡುತ್ತಿರುತ್ತೇವೆ. ಆದರೆ ಇದೊಂಥರಾ ಡಿಫರೆಂಟ್ ವಿದ್ಯಮಾನ. ಮಂಗಳೂರಿನ ಪಚ್ಚನಾಡಿಯಲ್ಲಿ ಅಳವಡಿಸಿರುವ ಬ್ಯಾನರ್ ಒಂದು ನೋಡುಗರ ಗಮನ ಸೆಳೆಯುತ್ತಿದೆ. ಅಷ್ಟೇ ಏಕೆ, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ. ಕಾರಣ ಅದು ಟಾಪರ್ ವಿದ್ಯಾರ್ಥಿಯದ್ದಲ್ಲ. ಪಾಸ್ ಆಗುವುದು ಕಷ್ಟ ಎಂದು ಭಾವಿಸಲಾಗಿದ್ದ ಬಾಲಕನೊಬ್ಬ ಜಸ್ಟ್ ಪಾಸ್ ಆಗಿರುವುದಕ್ಕೆ ಆತನ ಮಿತ್ರರು ಊರಿನಲ್ಲಿ ಹಾಕಿರುವ ಬ್ಯಾನರ್ ಇದು
ಮಂಗಳೂರು: ಯಾವುದೇ ಪರೀಕ್ಷೆಯಲ್ಲಿ ಟಾಪರ್ ಗಳಾದ ವಿದ್ಯಾರ್ಥಿಗಳದ್ದು, ಇಲ್ಲವೇ ಡಿಸ್ಟಿಂಕ್ಷನ್ ಪಾಸ್ ಆದ ವಿದ್ಯಾರ್ಥಿಗಳ ಬ್ಯಾನರ್ ಊರಿನಲ್ಲಿ ರಾರಾಜಿಸುವುದು ತಿಳಿದೇ ಇದೆ. ಟಾಪರ್, ಡಿಸ್ಟಿಂಕ್ಷನ್ ಪಡೆಯಲೇ ಬೇಕೆಂದೇನಿಲ್ಲ, ಹೇಳಿಕೊಳ್ಳುವಷ್ಟು ಉತ್ತಮ ಅಂಕ ಪಡೆದರೂ ಸಾಕು, ಖುಷಿಯಿಂದ ಕುಟುಂಬಸ್ಥರೋ ಇಲ್ಲ ಬಂಧು ಮಿತ್ರರೋ ಬ್ಯಾನರ್ ಹಾಕುವುದೂ ಇದೆ. ಆದರೆ ಜಸ್ಟ್ ಪಾಸ್ ಆದ ವಿದ್ಯಾರ್ಥಿಯ ಬ್ಯಾನರ್ ದೊಡ್ಡದಾಗಿ ಹಾಕುವುದನ್ನು ಎಲ್ಲಾದರೂ ಕಂಡಿದ್ದೀರಾ ಅಥವಾ ಕೇಳಿದ್ದೀರಾ?
ಹಾಗಿದ್ದರೆ ಇಲ್ಲಿ ನೋಡಿ! ಎಸ್ಸೆಸ್ಸೆಲ್ಸಿಯಲ್ಲಿ 625ರಲ್ಲಿ 300 ಅಂಕ ಗಳಿಸಿ ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಯೊಬ್ಬನಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿರುವ ಘಟನೆ ಮಂಗಳೂರು ನಗರದ ಮಂಗಳಾನಗರ ರಸ್ತೆಯ ಪಚ್ಚನಾಡಿ ಎಂಬಲ್ಲಿ ನಡೆದಿದೆ. ತಿಳಿ ಹಾಸ್ಯದಿಂದ ಕೂಡಿರುವ ಈ ಬ್ಯಾನರ್ ದಾರಿಹೋಕರ ಗಮನ ಸೆಳೆದಿರುವುದಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.