ನಗರದಲ್ಲಿ ಹೆಚ್ಚಿದ ತಾಪಮಾನದಿಂದಾಗಿ ಮಕ್ಕಳು ಸೇರಿ ವಿವಿಧ ವಯೋಮಾನದವರು ಅಸ್ವಸ್ಥರಾಗುತ್ತಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 30ರಷ್ಟು ಮಂದಿ ಬಿಸಿ ಗಾಳಿಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.
ಬಿಸಿಲ ಧಗೆ ದಿನದಿಂದ ದಿನಕ್ಕೆ ಏರತೊಡಗಿದೆ. ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಏಪ್ರಿಲ್ ತಿಂಗಳ ಬಹುತೇಕ ದಿನಗಳು ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು ಎಂದು ವರದಿಯಾಗಿದೆ. ನಿರೀಕ್ಷಿತ ಮಳೆ ಬಾರದಿದ್ದರಿಂದ ದಿನದ ಬಹುತೇಕ ಅವಧಿ ಉಷ್ಣ ವಾತಾವರಣದಿಂದ ಕೂಡಿದ್ದು, ಕೆಲವೆಡೆ ಬಿಸಿ ಗಾಳಿ ಕಾಣಿಸಿಕೊಳ್ಳುತ್ತಿದೆ. ಬೇಸಿಗೆ ರಜೆಯ ಕಾರಣ ಹೊರಾಂಗಣ ಆಟಗಳಿಗೆ ಮೊರೆಹೋಗುತ್ತಿರುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥಗೊಳ್ಳುತ್ತಿದ್ದಾರೆ.
ಕಲುಷಿತ ನೀರು, ಅಸುರಕ್ಷಿತ ಆಹಾರ ಸೇವನೆಯಿಂದ ಉದರಬೇನೆ, ವಿಷಮಶೀತ ಜ್ವರ, ಕಾಲರಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 2.5 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 2 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಅಧಿಕೃತವಾಗಿ ದೃಢಪಟ್ಟ 27 ಕಾಲರಾ ಪ್ರಕರಣಗಳಲ್ಲಿ 10 ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿವೆ.
ಆಸ್ಪತ್ರೆ ಭೇಟಿ ಹೆಚ್ಚಳ: ವಿಕ್ಟೋರಿಯಾ, ಜಯನಗರ ಸಾರ್ವಜನಿಕ ಆಸ್ಪತ್ರೆ, ಕಿಮ್ಸ್, ಮಣಿಪಾಲ್, ಫೋರ್ಟಿಸ್, ಅಪೋಲೊ, ನಾರಾಯಣ ಹೆಲ್ತ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರ ರೋಗಿಗಳಲ್ಲಿ ಶೇ 10 ಹಾಗೂ ಅದಕ್ಕಿಂತ ಅಧಿಕ ರೋಗಿಗಳು ಉದರಬೇನೆ, ವಿಷಮಶೀತ ಜ್ವರ, ಅತಿಸಾರ, ಬೆವರು ಗುಳ್ಳೆಯಂತಹ ಸಮಸ್ಯೆಗಳಿಂದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.
‘ಉದರಬೇನೆ ಸಮಸ್ಯೆಗೆ ಹೊರ ರೋಗಿಗಳ ವಿಭಾಗಕ್ಕೆ ಪ್ರತಿ ದಿನ 15-20 ರೋಗಿಗಳು ಬರುತ್ತಿದ್ದಾರೆ. ಶುಚಿ ಇಲ್ಲದ ಆಹಾರ ಮತ್ತು ನೀರು ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ’ ಎಂದು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
‘ಬೇಸಿಗೆಯಲ್ಲಿ ನೀರಿನಿಂದಲೇ ಹೆಚ್ಚು ರೋಗಗಳು ಹರಡುತ್ತವೆ. ಹೀಗಾಗಿ, ಶುದ್ಧ ನೀರು ಕುಡಿಯುವುದು ಬಹಳ ಮುಖ್ಯ. ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥ ಹಾಗೂ ಕತ್ತರಿಸಿದ ಹಣ್ಣುಗಳನ್ನು ತಿನ್ನುವುದರಿಂದ ರೋಗಾಣುಗಳು ಹರಡಿ, ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.
।ಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಈ ಅವಧಿಯಲ್ಲಿ ನೀರು ಆಹಾರ ಸೇವಿಸುವಾಗ ಜಾಗ್ರತೆ ವಹಿಸಬೇಕು. ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಮಕ್ಕಳಲ್ಲಿ ವಾಂತಿ ಭೇದಿ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆಡಾ.ಜಿ. ನಾಗರಾಜು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಬೇಸಿಗೆ ಅವಧಿಯಲ್ಲಿ ಬಿಸಲು ದೂಳಿನಿಂದ ಕಣ್ಣಿನ ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಕಣ್ಣಿನ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು
ಕಾಡುತ್ತಿದೆ ಕಣ್ಣಿನ ಅಲರ್ಜಿ
ಅತಿಯಾದ ಬಿಸಿಲಿಗೆ ಕಣ್ಣುರಿ ಕಣ್ಣಿನಲ್ಲಿ ನೀರು ತುರಿಕೆ ಕಣ್ಣು ಕೆಂಪಾಗುವುದು ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಗೆ ಜನ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ ನಾರಾಯಣ ನೇತ್ರಾಲಯ ಡಾ.ಅಗರವಾಲ್ಸ್ ಐ ಹಾಸ್ಪಿಟಲ್ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಬೆಂಗಳೂರು ನೇತ್ರಾಲಯದಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ. ‘ಸೂರ್ಯನ ತೀವ್ರ ಕಿರಣಗಳು ದೂಳು ಮತ್ತು ಮಾಲಿನ್ಯಕಾರಕಗಳಿಂದ ಕಣ್ಣಿಗೆ ಹೆಚ್ಚಿನ ಅಪಾಯ ಆಗುತ್ತದೆ. ಆಸ್ಪತ್ರೆಗೆ ಭೇಟಿ ನೀಡಿದ ಹಲವರಲ್ಲಿ ಒಣ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಅವಧಿಯಲ್ಲಿ ಕಣ್ಣಿನಲ್ಲಿ ನೀರಿನ ಉತ್ಪಾದನೆ ಕಡಿಮೆಯಾಗಿ ಕಿರಿಕಿರಿ ಉಂಟಾಗುತ್ತದೆ. ಕಣ್ಣಿನ ರಕ್ಷಣೆಗೂ ಆದ್ಯತೆ ನೀಡಬೇಕು’ ಎಂದು ಡಾ. ಅಗರವಾಲ್ಸ್ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀಪತಿ ಡಿ.ಕೆ. ತಿಳಿಸಿದರು.
ವೈದ್ಯರು ನೀಡಿದ ಪ್ರಮುಖ ಸಲಹೆಗಳು
ರಸ್ತೆ ಬದಿಯ ಆಹಾರ ಸುರಕ್ಷಿತವಲ್ಲ
ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು
ಕಾಯಿಸಿ ಆರಿಸಿದ ಶುದ್ಧ ನೀರನ್ನು ಕುಡಿಯಬೇಕು
ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು
ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು
ಹತ್ತಿಯ ಬಟ್ಟೆಯನ್ನು ಧರಿಸಬೇಕು