ಹೊಸದಿಲ್ಲಿ: ಇರಾನ್ ವಾಯುನೆಲೆ ಮೇಲೆ ಇಸ್ರೇಲ್ ಶುಕ್ರವಾರ ಮುಂಜಾನೆ ವಾಯುದಾಳಿ ನಡೆಸಿದೆ. ಮಿಸೈಲ್‌ಗಳನ್ನು ಇರಾನ್‌ನತ್ತ ಉಡಾಯಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಸೂಚನೆಗಳು ಸಿಗುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆ ಶೇ. 4ರಷ್ಟು ಏರಿಕೆ ಕಂಡಿದೆ.
ಬ್ರೆಂಟ್ ತೈಲದ ಬೆಲೆ ಬ್ಯಾರೆಲ್‌ಗೆ 90 ಡಾಲರ್‌ಗಿಂತಲೂ ಹೆಚ್ಚಿದೆ. ಏರಿದ ಪ್ರಮಾಣವನ್ನು ಶೇ. 3.94 ಎಂದು ಲೆಕ್ಕಹಾಕಲಾಗಿದೆ. ದಾಳಿಯ ತೀವ್ರತೆ ಮತ್ತು ಹಾನಿ ಪ್ರಮಾಣದ ಕುರಿತು ಉಭಯ ದೇಶಗಳೂ ಬಾಯ್ಬಿಟ್ಟಿಲ್ಲ. ಗಡಿರೇಖೆಗಳನ್ನು ಮೀರಿ ನಿಮ್ಮ ದೇಶದೊಳಗೆ ಬಂದು ದಾಳಿ ಮಾಡುವ ಸಾಮರ್ಥ್ಯ ನಮಗಿದೆ ಎಂಬ ಸಂದೇಶ ಸಾರುವ ಸಲುವಾಗಿ ಇಸ್ರೇಲ್ ಈ ದಾಳಿ ನಡೆಸಿದೆ ಎನ್ನಲಾಗಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ಕೊನೆಗೊಳ್ಳುವ ಸೂಚನೆಗಳು ಕಾಣಿಸುತ್ತಿಲ್ಲ. ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ತೈಲ ಪೂರೈಕೆಯಲ್ಲಿ ಕಡಿತ ಮಾಡಿರುವುದರಿಂದ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ತೈಲ ಬಿಕ್ಕಟ್ಟು ಉಂಟಾದರೆ ಅದನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಇರಾನ್- ಇಸ್ರೇಲ್ ನಡುವೆ ಸಂಘರ್ಷ ಹೆಚ್ಚಿದಾಗ ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಲು, ನಮ್ಮ ದೇಶದ ಹಿತದೃಷ್ಟಿಯಿಂದ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ನಾವು ತಯಾರಿ ನಡೆಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.